Tuesday, 21 July 2020

ಕನ್ನಡದ ಗಾದೆ ಮಾತುಗಳು

ಕನ್ನಡ ಗಾದೆಗಳು

  • ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
  • ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
  • ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
  • ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
  • ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
  • ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
  • ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
  • ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
  • ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
  • ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
  • ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
  • ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
  • ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
  • ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
  • ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
  • ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
  • ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
  • ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
  • ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
  • ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
  • ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
  • ಮೃತ್ಯು ಬಂದ ಮೇಲೆ ವೈದ್ಯ ಬಂದ.
  • ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
  • ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
  • ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
  • ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
  • ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
  • ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
  • ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
  • ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
  • ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
  • ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
  • ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
  • ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
  • ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
  • ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
  • ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
  • ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
  • ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
  • ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
  • ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
  • ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
  • ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು
  • ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
  • ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
  • ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
  • ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
  • ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
  • ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
  • ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
  • ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
  • ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
  • ಬೇಸರವಿರಬಾರದು, ಅವಸರ ಮಾಡಬಾರದು.
  • ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
  • ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
  • ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
  • ಗದ್ದೆ ಸುಟ್ಟರೂ ಹಾಳಾಗದು ಗಾದೆ.
  • ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
  • ಮಾಟ ಮಾಡಿದೋನ ಮನೆ ಹಾಳು.
  • ಒಬ್ಬರ ಕೂಳು ಇನ್ನೊಬ್ಬರ ಕುತ್ತು.
  • ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
  • ಹೊಳೆಯುವುದೆಲ್ಲಾ ಚಿನ್ನವಲ್ಲ.
  • ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
  • ಬರಿಗೈಯವರ ಬಡಿವಾರ ಬಹಳ.
  • ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
  • ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
  • ಅರೆಗೊಡದ ಅಬ್ಬರವೇ ಬಹಳ.
  • ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
  • ಆಪತ್ತಿಗಾದವನೇ ನಿಜವಾದ ಗೆಳೆಯ.
  • ಇಂದಿನ ಸೋಲು ನಾಳಿನ ಗೆಲುವು.
  • ಧೈರ್ಯವಿದ್ದವನಿಗೆ ದೈವವೂ ಅನುಕೂಲ.
  • ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
  • ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
  • ಉತ್ತಮವಾದ ನಗು ನೇಸರನ ಮಗು.
  • ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
  • ಪ್ರಾಮಾಣಿಕತೆಯಿಂದಲೇ ಪಾರಮಾರ್ಥ
  • ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
  • ಉದ್ದುದ್ದ ಮಾತಿನವರ ಮೊಳಕೈ ಮೊಂಡ.
  • ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
  • ನೋಡಿ ನಡೆದವರಿಗೆ ಕೇಡಿಲ್ಲ.
  • ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
  • ಚಿಂತೆ ಮಾಡಿದರೆ ಸಂತೆ ಸಾಗೀತೆ?
  • ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
  • ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
  • ತಾಯಿ ಬೇಕು ಇಲ್ಲವೇ ಬಾಯಿ ಬೇಕು.
  • ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
  • ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
  • ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
  • ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
  • ಮಂತ್ರಕ್ಕಿಂತ ಉಗುಳೇ ಹೆಚ್ಚು.
  • ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
  • ಎಡಗಣ್ಣು ಹೊಡೆದರೆ ನಾರಿಗೆ ಶುಭ.
  • ಊಟವೆಂದರೆ ಊರು ಬಿಟ್ಟುಹೋದಂತೆ.
  • ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
  • ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
  • ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
  • ಕಣ್ಣಿಗೂ ಮೂಗಿಗೂ ಮೂರು ಗಾವುದ.
  • ಕಲಹವೇ ಕೇಡಿಗೆ ಮೂಲ.
  • ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
  • ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
  • ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
  • ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
  • ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
  • ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
  • ದಕ್ಷಿಣೆಗಾದರೆ ಮಾತು ಹಿಡಿದಾನು, ಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
  • ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು.
  • ಭಾಷೆ ಕೊಟ್ಟವನು ಪೋಷಣೆ ಮಾಡನೇ?
  • ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
  • ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
  • ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
  • ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
  • ದುಡಿಯೋ ತನಕ ಮಡದಿ.
  • ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
  • ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
  • ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
  • ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
  • ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
  • ನಾಮವಿದ್ದವನಿಗೆ ಕಾಮ ಕಡಿಮೆಯೇ?
  • ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
  • ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
  • ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
  • ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
  • ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ
  • ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
  • ಹೂಡಿದರೆ ಒಲೆ, ಮಡಿದರೆ ಮನೆ.
  • ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
  • ಪಂಗಡವಾದವ ಸಂಗಡ ಬಂದಾನೆ?
  • ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
  • ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
  • ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
  • ತೇರಾದ ಮೇಲೆ ಜಾತ್ರೆ ಸೇರಿತು.
  • ಆಸೆಗೆ ತಕ್ಕ ಪರಿಶ್ರಮ ಬೇಕು.
  • ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
  • ಏನಾದರೂ ಆಗು ಮೊದಲು ಮಾನವನಾಗು.
  • ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
  • ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
  • ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
  • ಗಣೇಶನ್ನ ಮಾಡು ಅಂದ್ರೆ ಅವರ ಅಪ್ಪನ ಮಾಡಿದನಂತೆ.
  • ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
  • ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
  • ಟೊಳ್ಳು ಮಾತು ಸುಳ್ಳಿಗಿಂತ ಕಡೆ.
  • ಠಕ್ಕು ಇರುವವನಿಗೆ ಠಿಕಾಣಿ ಸಿಗದು.
  • ತೂಕ ಸರಿಯಿದ್ದರೆ ವ್ಯಾಪಾರ.
  • ನಡೆದಷ್ಟು ನೆಲ, ಪಡೆದಷ್ಟು ಫಲ.
  • ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
  • ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?
  • ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
  • ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
  • ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
  • ಸಂತೋಷವೇ ಯೌವನ, ಚಿಂತೆಯೇ ಮುಪ್ಪು
  • ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
  • ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.
  • ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
  • ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
  • ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
  • ಕುಲ ಬಿಟ್ಟರೂ ಛಲ ಬಿಡಬೇಡ.
  • ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
  • . ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
  • ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
  • ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
  • ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
  • ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗ, ಮತ್ತೊಬ್ಬ ಕೈ ಕಾಯಿಸಿದ.
  • ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
  • ಹುಲಿ ಹಸಿದಾಗ ಹುಲ್ಲು ತಿಂದೀತೆ?
  • ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
  • ದುರುಳನಿಂದಲೇ ದುರುಳುತನ.
  • ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
  • ನೆಂಟರನ್ನು ಲಕ್ಷಿಸದಿರಲು, ಸ್ನೇಹಿತರನ್ನು ಅಲಕ್ಷಿಸದಿರು.
  • ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
  • ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗು, ರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
  • ಹುಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
  • ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
  • ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
  • ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
  • ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
  • ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
  • ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
  • ನಗುವೇ ಆರೋಗ್ಯದ ಗುಟ್ಟು.
  • ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
  • ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
  • ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
  • ಮುಖ ನೋಡಿ ಮನ ತಿಳಿ.
  • ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.
  • ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
  • ಮನೆ, ಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
  • ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
  • ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
  • ಕಳೆದ ದಿನಗಳು ಬರೆದ ಪುಟಗಳಂತೆ.
  • ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
  • ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
  • ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?
  • ಕೆಡುವವರು ಮನೇಲಿದ್ರು ಕೆಡುತ್ತಾರೆ.
  • ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
  • ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.
  • ನೋಡಿ ನಡೆದಾಗ ಎಡವೋದು ತಪ್ಪುತ್ತೆ.
  • ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
  • ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
  • ರೈತನ ಮುಗ್ಗು ನಾಡಿನ ಕುಗ್ಗು.
  • ದರಿದ್ರ ಏಳಗೊಡುವುದಿಲ್ಲ, ಆಲಸ್ಯ ಉಣಗೊಡುವುದಿಲ್ಲ.
  • ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.
  • ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
  • ಹತ್ತೋಕ್ ಮೊದ್ಲು ಕುದರೆ ನೋಡು, ಬಿತ್ತೊಕ್ ಮೊದ್ಲು ಹೊಲ ನೋಡು.
  • ಅಶ್ವಿನೀ ಸಸ್ಯನಾಶಿನೀ.
  • ಭರಣಿ ಮಳೆ ಧರಣಿ ಬೆಳೆ.
  • ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
  • ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
  • ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
  • ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
  • ಸ್ವಾತಿ ಮಳೆ ಮುತ್ತಿನ ಬೆಳೆ.
  • ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
  • ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
  • ಚಿತ್ತಾ ಮಳೆ ವಿಚಿತ್ರ ಬೆಳೆ!
  • ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
  • ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
  • ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
  • ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
  • ಬಾಳೆ ಬೆಳೆದವ ಬಾಳಿಯಾನು.
  • ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
  • ತೋಟ ಮಾಡಿದವನಿಗೆ ಕೋಟಲೆಯಿಲ್ಲ.
  • ಬಲ್ಲಿದವನಿಗೆ ಕಬ್ಬು.
  • ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
  • ತಂದೆ, ತಾಯಿ ಸತ್ತರೂ ಸೋದರ ಮಾವ ಇರಬೇಕು.
  • ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
  • ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
  • ದೇಹಕ್ಕೆ ಮುಪ್ಪಾದರೇನಾಯ್ತು, ಅಧ್ಯಯನಕ್ಕೆ ಮುಪ್ಪಿದೆಯೇ?.
  • ಶರಣು ಆದವನಿಗೆ ಮರಣವಿಲ್ಲ.
  • ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
  • ಗುರುವಿಲ್ಲದೇ ಮಠವಿಲ್ಲ, ಹಿರಿಯರಿಲ್ಲದೆ ಮನೆಯಿಲ್ಲ.
  • ಮನೆ ಗೆದ್ದು ಮಾರು ಗೆಲ್ಲು.
  • ಮಾತು ಅಂಗಾರ ಮೌನ ಬಂಗಾರ
  • ಗುರಿಯಿಟ್ಟು ಗುಂಡು ಹಾಕು, ಸಮಯ ಸಾಧಿಸಿ ಬೇಟೆಯಾಡು.
  • ಮನೆಯಲ್ಲಿ ರಾಮಣ್ಣನಂತೆ, ಬೀದಿಯಲ್ಲಿ ಕಾಮಣ್ಣನಂತೆ.
  • ಕೆಟ್ಟದ್ದನ್ನು ಬಯಸಬೇಡ, ಒಳ್ಳೆಯದನ್ನು ಬಿಡಬೇಡ.
  • ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
  • ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
  • ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
  • ದಯವಿಲ್ಲದ ಧರ್ಮವಿಲ್ಲ.
  • ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
  • ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
  • ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
  • ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
  • ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
  • ಗೆಳೆತನದಲ್ಲಿ ಮೋಸಮಾಡಬೇಡ.
  • ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
  • ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.
  • ಕಾಯಕವನ್ನು ಸದಾ ಮಾಡು, ಸೋಮಾರಿತನವನ್ನು ಬಿಡು.
  • ಮೈತುಂಬ ಕಣ್ಣಿರಲಿ, ಕೈಯಲ್ಲಿ ಪೆನ್ನಿರಲಿ.
  • ಹಿರಿಯರ ಮಾತಿಗೆ ಕಿವಿಗೊಡು, ಚುಚ್ಚುಮಾತಿಗೆ ಬೆನ್ನು ಕೊಡು.
  • ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
  • ಮೊದಲು ಕಣ್ಣು ಬಿಡು, ನಂತರ ಕೈ ಮಾಡು.
  • ನಿನ್ನಿಂದ ಆದ ಪಾಪ, ಅದೇ ನಿನಗೆ ಶಾಪ.
  • ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ, ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
  • ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
  • ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
  • ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
  • ಹಾಲು ಕುಡಿದು ಹಾಗಲಕಾಯಿ ತಿಂದಂತೆ.
  • ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
  • ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರುವುದನ್ನು ಬಿಟ್ಟೀತೆ?
  • ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
  • ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
  • ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
  • ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
  • ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
  • ಬುದ್ಧಿಗಳ್ಳನಿಗೆಲ್ಲಿ ಸತ್ಯ, ಸದಾಚಾರ!
  • ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
  • ಸತ್ತವರಿಗೆ ಸಂಗವಿಲ್ಲ, ಕೆಟ್ಟವರಿಗೆ ನೆಂಟರಿಲ್ಲ
  • ನಿದ್ದೆಗೆ ಮದ್ದಿಲ್ಲ, ವಜ್ರಕ್ಕೆ ಬೆಲೆಯಿಲ್ಲ.
  • ಮನೆ ಮಕ್ಕಳು ಮಾಣಿಕ್ಯ, ನೆರೆಮನೆ ಮಕ್ಕಳು ಕಸಿವಿಸಿ.
  • ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
  • ಮುಖಕ್ಕೆ ಮೂಗು ಚೆಂದ, ಮೂಗಿಗೆ ಮೇಲೆರಡು ಕಣ್ಣು ಚೆಂದ.
  • ವಯಸ್ಸಿಗೆ ತಕ್ಕ ಬುದ್ಧಿ ಕಲಿ.
  • ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
  • ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
  • ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
  • ಅಪಕೀರ್ತಿ ತರುವ ಮಗನಿಗಿಂತ, ಸತ್ಕೀರ್ತಿ ತರುವ ಆಳೇ ಮೇಲು.
  • ಕೊಟ್ಟು ಕೆಟ್ಟವರಿಲ್ಲ, ತಿಂದು ಬದುಕಿದವರಿಲ್ಲ.
  • ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
  • ಹೊರಗೆ ಝಗ ಝಗ, ಒಳಗೆ ಭಗ ಭಗ.
  • ಕಲ್ಲಾದರು ಕರಗಬಹುದು, ಕಪಟಿಯ ಮನಸ್ಸು ಕರಗದು.
  • ಮೂಕವೇದನೆಯು ಸತ್ಯಕ್ಕಿಂತ ಮೇಲು.
  • ಕೃತಿಯಿಲ್ಲದ ಮಾತು, ಕಸ ಬೆಳೆದ ತೋಟವಿದ್ದಂತೆ.
  • ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
  • ಲೆಕ್ಕಕ್ಕಿಂತ ಹೆಚ್ಚು ಹೊರಬಾರದು, ಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
  • ಅರ್ಧ ಕಲಿತವನ ಆಬ್ಬರ ಹೆಚ್ಚು.
  • ದೇಶ ತಿರುಗಬೇಕು, ಭಾಷೆ ಕಲಿಯಬೇಕು.
  • ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
  • ಅಲ್ಪರ ಸಂಗ ಅಭಿಮಾನ ಭಂಗ.
  • ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
  • ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.
  • ಪಡಿತಿಂದು ಗುಡಿಯಲ್ಲಿ ಉರುಳಾಡಿದ.
  • ನೋಡಿ ನಡೆದವನಿಗೆ ಕೇಡಿಲ್ಲ.
  • ಪದವೂ ಮುಗಿಯಿತು, ತಂತಿಯೂ ಹರಿಯಿತು
  • ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
  • ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.
  • ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
  • ಮಗ ಸಣ್ಣವನಾದರೂ, ಮಾತು ಸಣ್ಣದಲ್ಲ.
  • ಮಂತ್ರ ಸ್ವಲ್ಪ, ಉಗುಳೇ ಬಹಳ.
  • ಮಾನ ಹೋದ ಮೇಲೆ ಮರಣ ಬಂದ ಹಾಗೆ.
  • ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
  • ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
  • ಬಾಯಿ ಬಂಗಾರ, ಮನ ಅಂಗಾರ.
  • ಬಾಯಿಯಿದ್ದ ಮಗ ಬದುಕುವನು.
  • ಭಾರವಾದ ಪಾಪಕ್ಕೆ ಘೋರವಾದ ನರಕ.
  • ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
  • ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
  • ಕಲಿತವನಿಗಿಂತ ನುರಿತವನೇ ಮೇಲು.
  • ಕಷ್ಟದಂತೆ ಫಲ, ಮನದಂತೆ ಮಹಾದೇವ.
  • ಕೀಟ ಸಣ್ಣದಾದರೂ ಕಾಟ ಬಹಳ.
  • ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
  • ಕೂಳಿಗೆ ಮೂಲ ಭೂಮಿಗೆ ಭಾರ.
  • ಕೇಳುವವರ ಮುಂದೆ ಹೇಳುವವರು ದಡ್ಡರು.
  • ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
  • ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
  • ಹಸಿದವನಿಗೆ ಹಳಸಿದ್ದೇ ಪಾವನ.
  • ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
  • ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
  • ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
  • ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
  • ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
  • ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
  • ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
  • ಆಸೆಯೇ ಜೀವನ, ಜೀವನವೇ ಆಸೆ.
  • ಎಡವಿದ ಕಾಲೇ ಎಡವುದು ಹೆಚ್ಚು.
  • ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
  • ಎಣ್ಣೆ ಬರುವಾಗ ಗಾಣ ಮುರೀತು.
  • ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
  • ಇಲಿ ಬೇಟೆಗೆ ತಮಟೆ ಬಡಿದಂಗೆ.
  • ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
  • ಕಡಲೆ ತಿಂದು ಕೈತೊಳೆದ ಹಾಗೆ.
  • ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
  • ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
  • ಹೆಂಡತಿ ಮುಂದಿರಬೇಕು, ಮಗ ಹಿಂದಿರಬೇಕು.
  • ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.
  • ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
  • ಜಾತಿ ಜಾತಿಗೆ ವೈರಿ, ನಾಯಿ ನಾಯಿಗೆ ವೈರಿ.
  • ಮದುವೆ ಸಾಲ ಮಸಣಾದವರೆಗೂ.
  • ನೂಲಿನಂತೆ ಸೀರೆ, ಬೀಜದಂತೆ ವೃಕ್ಷ.
  • ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
  • ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
  • ಕುಡಿಗೆ ಕುಂಬಳಕಾಯಿ ಭಾರವೇ?
  • ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
  • ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
  • ಸೋಲಿಲ್ಲದ ಸರದಾರನಿಲ್ಲ, ಸಂಗಮವಿಲ್ಲದ ಸಾವಿಲ್ಲ.
  • ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
  • ಆತ್ಮೀಯವಾದ ಪ್ರೇಮ ಅಮರವಾದದ್ದು.
  • ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
  • ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
  • ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
  • ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
  • ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
  • ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
  • ಮನೆ ಬೆಳಗಲಿ ದೀಪ ಬೇಕು, ಮಾನವ ಬೆಳಗಲು ಅಕ್ಷರ ಬೇಕು.
  • ಕತ್ತೆಗೆ ತಿಪ್ಪೆಯೇ ತವರುಮನೆ.
  • ಕತ್ತೆಗೆ ಯಾಕೆ ಹತ್ತಿಕಾಳು?
  • ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
  • ಕತ್ತೆಯಾಗಬೇಡ ಕಾಗೆಯಾಗು.
  • ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
  • ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
  • ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
  • ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
  • ಅರಿತರೆ ಮಾತನಾಡು, ಮರೆತರೆ ಕೂತು ನೋಡು.
  • ಆಕಾಶ ನೋಡೋಕೆ ನೂಕಾಟವೇಕೆ?
  • ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
  • ಜಾರುವುದು ತಪ್ಪಿದರೆ ಏರುವುದು ಸಾಧ್ಯ.
  • ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
  • ಬಾಳೆಂಬ ಬಂಧನದಲ್ಲಿ ಈಜಬೇಕು, ಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
  • ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
  • ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
  • ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
  • ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
  • ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?

Thursday, 3 September 2015

ದ.ರಾ.ಬೇಂದ್ರೆ

ದ.ರಾ.ಬೇಂದ್ರೆ ೧೮೯೬-೧೯೮೧

ಬೇಂದ್ರೆ ೧೮೯೬ ಜನವರಿ ೩೧ ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡದ ಪ್ರಸಿದ್ದಕವಿ. ಹೊಸಗನ್ನಡದ ಭಾವಗೀತದ ಮೂಲ ಪ್ರವರ್ತಕರಲ್ಲೊಬ್ಬರು. ಹಾಗೂ ಅದರ ಪ್ರಮುಖ ಪ್ರತಿನಿದಿಗಳು. ‘ಅಂಬಿಕಾತನಯದತ್ತ, ಎಂಬುದು ಅವರ ಕಾವ್ಯ ನಾಮ. ಬಿ.ಎ ಪದವಿ ಗಳಿಸಿ ಧಾರವಾಡದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಬಿಸಿದ ಇವರು ಗೆಳೆಯರಗುಂಪು ಎಂಬ ಸಾಹಿತ್ಯ ಸಂಘವನ್ನು ಕಟ್ಟಿ ಕಾವ್ಯವಾಚನ, ಕಾವ್ಯವಿಮರ್ಶೆ, ಇತರ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಜಯಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅಲ್ಲದೆ ಕೆಲಕಾಲ ಆಮಾಸ ಪತ್ರಿಕೆಯ ಸಂಪಾದನೆಯ ಕಾರ್ಯ ನಿರ್ವಹಿಸಿದರು. ಬೇಂದ್ರೆಯವರ ಸಾಹಿತ್ಯ ಕೃಷಿ ವಿಫುಲವಾದದ್ದು.
ಕವಿತೆ, ನಾಟಕ, ವಿಮರ್ಶೆ, ಸಂಶೋಧನೆ. ಎಲ್ಲದರಲ್ಲಿಯೂ ಬೇಂದ್ರೆಯವರ ಕೈವಾಡ ಇದೆ. ಕಾವ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕೃಷ್ಣ ಕುಮಾರಿ ಅವರ ಪ್ರಕಟಿತ ಮೊದಲ ಕವನ. ಬೇಂದ್ರೆಯವರ ಪ್ರಥಮ ಕವನಸಂಕಲನ ‘ಗರಿ, ಯಲ್ಲಿ ಭಾವೋತ್ಕಟತೆ, ಛಂದಸ್ಸಿನ ನಿರರ್ಗಳತೆ ಹಾಗೂ ಗೇಯತೆ ಚನ್ನಾಗಿ ಮೂಡಿಬಂದಿದೆ. ಬೇಂದ್ರೆಯವರ ಪ್ರೇಮಗೀತೆಗಳು ಹಾಗೂ ಸಾಮಾಜಿಕ ಗೀತೆಗಳಲ್ಲಿ ವಸ್ತುನಿಷ್ಟತೆ ಹೆಚ್ಚಾಗಿ ಕಂಡುಬರುತ್ತದೆ. ‘ಕುಣಿಯೋಣು ಬಾರಾ, ‘ಮನದನ್ನೆ, ‘ನೀ ಹೀಂಗ ನೋಡಬ್ಯಾಡನನ್ನ, ಈ ಕವನಗಳ ಮೂಲಭಾವ ಕವಿಯದೇ ಆಗಿದ್ದರೂ ಅದು ಸಾಮಾನ್ಯ ಜೀವನದ ಒಂದು ಭಾಗವಾಗಿ ಮಾತ್ರ ಬರುತ್ತದೆ. ‘ಪುಟ್ಟವಿಧವೆ, ಹೆಣದಹಿಂದೆ, ಅನ್ನಾವತಾರ, ಇಂಥ ಕವನಗಳಲ್ಲಿಯ ಹೃದಯ ವೇದಕತೆ ಈ ಆತ್ಮೀಯತೆಯ ಫಲವಾಗಿದೆ. ಗೀತದಲ್ಲಿ ಕವಿಯ ಸುಖ ದುಃಖಗಳು, ದಾಂಪತ್ಯದ ಸರಸ-ವಿರಸಗಳು, ಸಂಸಾರದ ಅನೇಕ ತಾಪತ್ರಯಗಳು ಇವೇ ಕಾವ್ಯದಲ್ಲಿ ವಸ್ತುವಾಗಿವೆ. ‘ಜೋಗಿ, ಕವನದಲ್ಲಿ ಜೀವನದಲ್ಲಿ ಮಾಡುವ ಕಾಳ ರಾತ್ರಿಯ ಅನುಭವ ವರ್ಣಿತವಾಗಿದೆ.
ಬೇಂದ್ರೆಯವರು ಕೆಲವು ಸಾಂಕೇತಿಕ ಅಸಂಗತ ನಾಟಕಗಳನ್ನು ಬರೆದಿದ್ದಾರೆ. ‘ಸಾಯೋ ಆಟ, ‘ದೆವ್ವದ ಮನೆ, ‘ಹೊಸ ಸಂಸಾರ, ಹಾಗೂ ‘ಜಾತ್ರೆ, ‘ನಗೆಯ ಹೊಗೆ, ಹಾಗೂ ‘ಉದ್ದಾರ, ದುರಂತ ನಾಟಕದ ರೂಪಲಕ್ಷಣಗಳನ್ನೆಲ್ಲ ಒಳಗೊಂಡಿದೆ. ನಗೆಯ ಹೊಗೆ ನಾಟಕದಲ್ಲಿ ನಗೆಯಿದ್ದರೂ ಅದು ಕರುಣಕ್ಕಿಂತ ಹೆಚ್ಚು ಕಟುವಾಗಿದೆ. ಈ ನಾಟಕದಲ್ಲಿ ‘ಬಹಿಷ್ಕಾರದ, ದ ದುರಂತ ವೈಯಕ್ತಿಕವಾಗಿದೆ. ಉದ್ದಾರ, ನಾಟಕದಲ್ಲಿ ಸಮಾಜದ ಬೇರೆ ಬೇರೆ ಪಂಗಡಗಳ ನಡುವೆ ನಡೆಯುವ ಹೋರಾಟ ನಾಟಕದ ಕ್ರಿಯೆಗೆ ಹೆಚ್ಚು ಶಕ್ತಿಯನ್ನೊದಗಿಸುವುದನ್ನು ಕಾಣುತ್ತೇವೆ.
ಬೇಂದ್ರೆಯವರ ಲೇಖನ ಶಕ್ತಿ ಕನ್ನಡಕ್ಕೇ ಸೀಮಿತವಾಗಿಲ್ಲ. ಮರಾಠಿಯಲ್ಲೂ ಕೃತಿ ರಚನೆ ಮಾಡಿದ್ದಾರೆ. ೧೯೬೫ ರಲ್ಲಿ ಅವರ ಮರಾಠಿ ಕೃತಿ ‘ಸಂವಾದಕ್ಕೆ, ಕೇಳ್ಕರ್, ಬಹುಮಾನ ದೊರೆತಿದೆ. ಅವರು ಇಂಗ್ಲಿಷಿನಿಂದ ಭಾಷಾಂತರ ಮಾಡಿರುವ ಅರವಿಂದರ ಭಾರತೀಯ ಪುನರ್ಜನ್ಮ, ಹಾಗೂ ರಾನಡೆಯವರ ಉಪನಿಷದ್ರಹಸ್ಯಗಳು, ಅಮೂಲ್ಯ ಗ್ರಂಥಗಳು. ‘ವರಕವಿ, ಎಂಬ ಬಿರುದಿಗೆ ಭಾಜನರಾದ ಬೇಂದ್ರೆಯವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ.

     ೧೯೫೯ ರಲ್ಲಿ ಇವರ ಅರುಳು-ಮರುಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದವು. ೧೯೭೩ ರಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯು ಅವರ ನಾಕು ತಂತಿ ಕವನ ಸಂಕಲನಕ್ಕೆ ಲಬ್ಯವಾಗಿದೆ. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ೨೭ ನೇ ಕನ್ನಚಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೯೫ ಬೇಂದ್ರೆ ಶತಮಾನೋತ್ಸವ ವರ್ಷ ರಾಜ್ಯಾದ್ಯಂತ ಅವರ ಸಾಹಿತ್ಯ ಜೀವನ ಕುರಿತ ಚರ್ಚೆಗಳು ನಡೆದವು.

ರಸವೆ ಜನನ
ವಿರಸ ಮರಣ
ಸಮರಸವೇ ಜೀವನ
ಹೀಗೆ ಕೇವಲ ಆರೇ ಆರು ಶಬ್ದಗಳಲ್ಲಿ ಜೀವನವನ್ನು ಕುರಿತು ಅತ್ಯಂತ ಅರ್ಥಗರ್ಬಿತವಾಗಿ, ಪರಿಣಾಮಕಾರಿಯಾಗಿ, ಹೃದಯಸ್ಪರ್ಶಿಯಾಗಿ ವ್ಯಾಖ್ಯಾನ ಮಾಡಿರುವ ದಾರ್ಶನಿಕ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಒಟ್ಟಿನಲ್ಲಿ ಬೇಂದ್ರೆಯವರ ವ್ಯಕ್ತಿತ್ವ ಮಹತ್ವ ಪೂರ್ಣವಾದುದಾಗಿದೆ.


ಕುವೆಂಪು

ಕುವೆಂಪು

ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”.

ಜನನ: ಕುವೆಂಪುರವರು ೧೯೦೪ ರ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ ೧೯೨೯ ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, ೧೯೫೫ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು (ಪೂರ್ಣಚಂದ್ರ ತೇಜಸ್ವಿ, ಕೋಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ಮೊದಲ ಹಂತ: ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರು ಬರೆದಿದ್ದ “ಬಿಗಿನರ್ಸ್ ನ್ಯೂಸ್” ಎಂಬ ಇಂಗ್ಲೀಷ್ ಕವನಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಶ್ ಕವಿ ಜೆ.ಎಚ್.ಕಸಿನ್ಸ್ ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ರವರು ಬರೆದ ಮೊದಲ ಕನ್ನಡ ಕವನ ಸಂಕಲನ “ಅಮಲನಕಥೆ”. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ. ಜತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿ ಯವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. ೧೯೨೫ ರಲ್ಲಿ ಪ್ರಕಟವಾದ ಕುವೆಂಪುರವರ “ಬೊಮ್ಮನಹಳ್ಳಿ ಕಿಂದರಿಜೋಗಿ” ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.
ಬೆಳವಣಿಗೆ: ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ” ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರು “ಬೆರಳ್ಗೆ ಕೊರಳ್”,”ಶೂದ್ರ ತಪಸ್ವಿ”,”ಸ್ಮಶಾನ ಕುರುಕ್ಷೇತ್ರಂ”, “ರಕ್ತಾಕ್ಷಿ”,”ಜಲಗಾರ” ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ” ಕೊಳಲು”,”ಅಗ್ನಿಹಂಸ”,”ಅನಿಕೇತನ”,”ಅನುತ್ತರಾ”, “ಇಕ್ಷು ಗಂಗೋತ್ರಿ”, “ಕಥನ ಕವನಗಳು”,” ಕಲಾಸುಂದರಿ”, “ಕಿಂಕಿಣಿ”, “ಕೃತ್ತಿಕೆ”, “ಜೇನಾಗುವ”, “ನವಿಲು”, “ಪಕ್ಷಿಕಾಶಿ”, “ಚಿತ್ರಾಂಗದಾ” ಮೊದಲಾದ ಕವನಸಂಕಲನಗಳು, “ರಾಮಕೃಷ್ಣ ಪರಮಹಂಸ”, “ಸ್ವಾಮಿ ವಿವೇಕಾನಂದ” ಜೀವನಚರಿತ್ರೆಗಳನ್ನೂ ಇವರು ಬರೆದಿದ್ದಾರೆ.

“ನೆನಪಿನ ದೋಣಿಯಲ್ಲಿ” ಕುವೆಂಪುರವರ ಆತ್ಮಕಥೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೫೮ ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ರಲ್ಲಿ ಪದ್ಮಭೂಷಣ
೧೯೬೪ ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
೧೯೬೮ ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ
ಮೂರು(೩) ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ
೧೯೮೭ ರಲ್ಲಿ ಪಂಪ ಪ್ರಶಸ್ತಿ
೧೯೮೯ರಲ್ಲಿ ಪದ್ಮವಿಭೂಷಣ
೧೯೯೨ ಕರ್ನಾಟಕ ರತ್ನ ಪ್ರಶಸ್ತಿ

ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ…’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. “ಅಭಿನವ ವಾಲ್ಮೀಕಿ” ಎಂದೇ ಜನಮಾನಸದಲ್ಲಿ ಪ್ರಸಿದ್ಧರಾದ ಕುವೆಂಪುರವರು ೧೯೯೪ ನವೆಂಬರ್ ೧೧ರಂದು ಮೈಸೂರಿನ ತಮ್ಮ ನಿವಾಸ ಉದಯರವಿಯಲ್ಲಿ ನಿಧನರಾದರು.


Wednesday, 2 September 2015

ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಸಂಚಾರ


ಜೀವಿಗಳಲ್ಲಿ ಆಹಾರವು ಹೇಗೆ ಶಕ್ತಿಯಾಗಿ ಪರಿವರ್ತಿತವಾಗುತ್ತದೆ?

       ಒಂದು ಪರಿಸರವ್ಯವಸ್ಥೆಯಲ್ಲಿನ ವಿವಿಧ ಜೀವಿಗಳು ನಿರಂತರವಾಗಿ ಬೆಳೆಯುತ್ತವೆ, ಸಂತಾನೋತ್ಪತ್ತಿ ಮಾಡುತ್ತವೆ, ಸಾಯುತ್ತವೆ ಮತ್ತು ವಿಘಟನೆಗೆ ಒಳಗಾಗುತ್ತವೆ. ಅವುಗಳ ಚಟುವಟಿಕೆಗಳಿಗೆ ಶಕ್ತಿಯ ಅವಶ್ಯಕತೆ ಇದೆ. ಜೀವಿಗಳು ಆಹಾರ ಸೇಏಸಿದಾಗ, ಅದರಲ್ಲಿರುವ ಕಾರ್ಬೋಹೈಡ್ರೇಟನ ಅಂಶ ಶಕ್ತಿಯ ಆಕರವಾಗುತ್ತದೆ. ನಿಮಗೆ ಗೊತ್ತಿರುವಂತೆ, ಉಸಿರಾಟದ ಪರಿಣಾಮವಾಗಿ ಆಹಾರದಲ್ಲಿರುವ ಶಕ್ತಿ ಬಿಡುಗಡೆಯಾಗುತ್ತದೆ. ಉಸಿರಾಟ ಕ್ರಿಯೆಯುಕಾರ್ಬೋಹೈಡ್ರೇಟಗಳಲ್ಲಿ ಸಂಗ್ರಹವಾಗಿರುವ ಶಕ್ತಿಯನ್ನು ಜೈವಿಕ ಕ್ರಿಯೆಗಳಿಗೆ ಒದಗಿಸುತ್ತದೆ.
        ಎಲ್ಲ ಪರಿಸರವ್ಯವಸ್ಥಗಳಲ್ಲಿ ಸೂರ್ಯನ ಶಕ್ತಿಯೇ ಶಕ್ತಿಯ ಪ್ತಾಥಮಿಕ ಆಕರ. ನಿಮಗೆ ತಿಳಿದಿರುವರತೆ ಈ ಶಕ್ತಿಯನ್ನು ನೇರವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಇರುವುದು ಹಸಿರು ಸಸ್ಯಗಳಿಗೆ ಮಾತ್ತ. ಅವು ಈ ಶಕ್ತಿಯನ್ನು , ಕಾರ್ಬೋಹೈಡ್ರೇಟ್ , ಕೊಬ್ಬು ಹಾಗೂ ಪ್ರೊಟೀನ್ ಗಳ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ.    ಈ ಸಸ್ಯಗಳನ್ನು ಭಕ್ಷಕರು ಸೇವಿಸಿದಾಗ, ಪೋಷಣಾ ಸ್ತರಗಳಲ್ಲಿ ಶಕ್ತಿಯು ಏಕಮುಖವಾಗಿ ಸಂಚರಿಸುತ್ತೆದೆ.
        ಆದರೆ, ಈ ವರ್ಗಾವಣೆ ಪ್ರಕ್ರಿಯಲ್ಲಿ ಶೇ 90% ರಷ್ಟು ಶಕ್ತಿಯು ಪುನಃ  ಬಳಸಿಕೊಳ್ಳಲಾಗದ ಉಷ್ಣದ ರೂಪದಲ್ಲಿ ಪರಿಸರದಲ್ಲಿ ನಷ್ಟವಾಗುತ್ತದೆ. ಪೋಷಣಾಸ್ತರದಲ್ಲಿ ಮೇಲೇರಿದಲತೆ, ಪ್ರತಿ ಹಂತದಲ್ಲಿ ಬಳಕೆಗೆ ಒದಗುವ ಶಕ್ತಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಪೋಷಣಾಸ್ತೆರದಲ್ಲಿ ಒದಗುವ ಒಟ್ಟು ಶಕ್ತಿಯ ಪ್ರಮಾಣದಲ್ಲಿ ಕೇವಲ ಶೇಕಡಾ 10 ರಷ್ಟು ಮಾತ್ತ ಮುಂದಿನ ಪೋಷಣಾಸ್ತರಕ್ಕೆ ವರ್ಗಾವಣೆಯಾಗುತ್ತದೆ. ಉತ್ಪಾದಕ ಸಸ್ಯವೊಂದರಿದರಲೆ 10,000 ಘಟಕಗಳಷ್ಟು ಆಹಾರ ಶಕ್ತಿ ಇದ್ದರೆ ಮುಂದಿನ ಹಂತದ ಪ್ರಾಥಮಿಕ ಭಕ್ಷಕವನ್ನು ಸೇರುವ ಶಕ್ತಿಯ ಪ್ರಮಾಣ ಸುಮಾರು 1000 ಘಟಕಗಳಷ್ಟಿರುತ್ತದೆ. ದ್ವಿತೀಯಕ ಭಕ್ಷಕವನ್ನು ಸೇರುವ ಶಕ್ತಿಯ ಪ್ರಮಾಣ. ಕೇವಲ ೧೦೦ ಘಟಕಗಳಷ್ಟಿರುತ್ತದೆ,ಮತ್ತು ತ್ರುತೀಯಕ ಭಕ್ಷಕವನ್ನು ಸೇರುವ ಪ್ರಮಾಣ. ಕೇವಲ ೧೦ ಘಟಕಗಳಷ್ಟಿರುತ್ತದೆ.
           ಹೀಗಾಗಿ ಪರಿಸರದಲ್ಲಿ ಶಕ್ತಿಯ. ಸಂಚಾರವು  ಏಕ ಮುಖವಾಗಿದ್ದು ಪ್ರತಿ  ಪೋಷಣಾಸ್ತರದಲ್ಲಿ  ಬಳಕೆಗೆ ಒದಗದ ಉಷ್ಣದ ರೂಪದಲ್ಲಿ  ಶಕ್ತಿಯು ಪರಿಸರವನ್ನು ಸೇರುತ್ತದೆ.